ಅಬರ್‍ಡೀನ್

	ಪ್ರಪಂಚದಲ್ಲಿ ಈ ಹೆಸರಿನ ನಾಲ್ಕು ಪಟ್ಟಣಗಳಿವೆ. 1 ಸ್ಕಾಟ್ಲೆಂಡಿನ ಅಬರ್ ಡೀನ್ ಪೈರಿನ ಮುಖ್ಯಪಟ್ಟಣ. ಡೀ ಮತ್ತು ಡಾನ್ ನದಿಗಳ ಮಧ್ಯೆ ಸ್ಕಾಟ್ಲೆಂಡಿನ ಪೂರ್ವ ತೀರದಲ್ಲಿ ಉತ್ತರಸಮುದ್ರಾಭಿಮುಖವಾಗಿ ಬೆಳೆದಿದೆ. ಉತ್ತರ ಮತ್ತು ದಕ್ಷಿಣಪ್ರದೇಶಗಳ ಮಧ್ಯೆ ರೈಲು ಹಾಗೂ ರಸ್ತೆ ಸಾರಿಗೆಗಳಿಗೆ ನಿಲ್ದಾಣವಾಗಿರುವುದಲ್ಲದೆ, ಸ್ಕಾಟ್ಲೆಂಡಿನ ಮುಖ್ಯರೇವುಪಟ್ಟಣವು ಆಗಿದೆಯಲ್ಲದೆ ವಿಹಾರಸ್ಥಳವೆಂದು ಹೆಸರುಪಡೆದಿದೆ. ವಿಸ್ತೀರ್ಣ 16.4 ಚ.ಮೈ; ಜನ ಸಂಖ್ಯೆ 182,729 (1957). ಸಮೀಪದಲ್ಲೇ ಕಟ್ಟಡಗಳಿಗೆ ಬಳಸಲಾಗುವ ಗ್ರ್ಯಾನೈಟ್ ಶಿಲೆ ಅಧಿಕವಾಗಿರುವುದರಿಂದ, ಗ್ರ್ಯಾನೆಟ್ ನಗರವೆಂದು ಹೆಸರುಪಡೆದಿದೆ. ಇಲ್ಲಿನ ಪ್ರಸಿದ್ಧ ಸೇಂಟ್ ಮಚಾರ್ ಆರಾಧನ ಮಂದಿರವನ್ನು ಪೂರ್ಣವಾಗಿ ಈ ಶಿಲೆಯಲ್ಲೇ ಕಟ್ಟಿದ್ದಾರೆ. ಆಗ್ನೇಯ ಸ್ಕಾಟ್ಲೆಂಡಿನ ವಾಣಿಜ್ಯಕೇಂದ್ರವಾಗಿರವುದಲ್ಲದೆ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಹೊಂದಿದೆ. ದನಕರುಗಳ ವ್ಯಾಪಾರವೂ ಅಧಿಕಪ್ರಮಾಣದಲ್ಲಿ ನಡೆಯುತ್ತದೆ. ತೀರಪ್ರದೇಶದಲ್ಲಿ ಮೀನುಗಾರಿಕೆ ಜನರ ಪ್ರಧಾನ ಕಸಬು. ಬಟ್ಟೆ ಗಿರಣಿಗಳು, ಕಾಗದದ ಮರಗೆಲಸದ, ಎಂಜಿನಿಯರಿಂಗ್ ಮತ್ತು ವ್ಯವಸಾಯ ಉಪಕರಣಗಳ ಕಾರ್ಖಾನೆಗಳಿವೆ. ಒಂದು ವಿಶ್ವವಿದ್ಯಾನಿಲಯವಿದೆ. ಡೀ ನದಿಯ ಅಳಿವೆಯ ಅನುಕೂಲತೆಯಿಂದಾಗಿ ಇದು ಸ್ವಾಭಾವಿಕ ಬಂದರಾಗಿದೆ. ಗ್ರೇಟ್ ಬ್ರಿಟನ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಗಳ ರೇವುಪಟ್ಟಣಗಳೊಂದಿಗೆ ವಾಣಿಜ್ಯಸಂಪರ್ಕವನ್ನು ಪಡೆದಿದೆ.

	2 ಅಮೆರಿಕ ಸಂಯುಕ್ತಸಂಸ್ಥಾನದ ಮಿಸಿಸಿಪಿಯ ಈಶಾನ್ಯಭಾಗದಲ್ಲಿರುವ ಟಾಂಬಿಗ್ಬೀ ನದಿಯ ದಡದ ಮೇಲಿರುವ ಊರು. ಜನಸಂಖ್ಯೆ 5,290 (1950). ಅನೇಕ ಸಣ್ಣ ಕೈಗಾರಿಕೆಗಳಿವೆ.

	3 ಅಮೆರಿಕ ಸಂಯುಕ್ತಸಂಸ್ಥಾನದ ದಕ್ಷಿಣದ ಕೋಟಾದ ಈಶಾನ್ಯಭಾಗದಲ್ಲಿರುವ ಪಟ್ಟಣ. ಜನಸಂಖ್ಯೆ 21,051 (1950). ಪ್ರಾಂತದ ಆರ್ಥಿಕ ಮತ್ತು ವಾಣಿಜ್ಯಕೇಂದ್ರ. ಆಹಾರಧಾನ್ಯ, ಆಲೂಗೆಡ್ಡೆ, ಹುಲ್ಲು ಮತ್ತು ಅಗಸೆನಾರು-ಇವು ಇಲ್ಲಿನ ವ್ಯವಸಾಯೋತ್ಪನ್ನಗಳು.

	4 ಅಮೆರಿಕ ಸಂಯುಕ್ತಸಂಸ್ಥಾನದ ವಾಷಿಂಗ್ ಟನ್ ಭಾಗದ ಗ್ರೇಸ್ ಹಾರ್ಬರ್ ಕೌಂಟಿಯ ದೊಡ್ಡ ಪಟ್ಟಣ ಮತ್ತು ರೇವು. ವಿಸ್ತೀರ್ಣ 9.6 ಚ.ಮೈ. ಜನಸಂಖ್ಯೆ 19,653 (1950). ಪಲೈವುಡ್, ಸೆಲ್ಟ್, ಕಾಗದ, ಮರಗಳು, ಮರದ ಸಾಮಾನುಗಳು, ಮೀನು ಹಾಗೂ ಇತರ ಸಾಮಗ್ರಿಗಳು ಇಲ್ಲಿಯ ಮುಖ್ಯ ಉತ್ಪನ್ನಗಳು.				
(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ